ಔರಾದ: ಔರಾದ(ಬಿ) ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿಕೊಂಡು ಕೆಲಸ ಮಾಡುತ್ತಿದ್ದು, ಶಿಕ್ಷಣ, ಆರೋಗ್ಯ, ರೈತರ ಏಳಿಗೆ, ಮೂಲಸೌಕರ್ಯಗಳ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಸಣ್ಣ-ಪುಟ್ಟ ಕೈಗಾರಿಕೆಗಳ ಸ್ಥಾಪನೆಗೆ ಬೇಕಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಂಪನಿಗಳನ್ನು ತಂದು ಯುವಜನತೆಗೆ ಉದ್ಯೋಗಗಳನ್ನು ಒದಗಿಸಬೇಕಿದೆ. ಕ್ಷೇತ್ರವು ಮಾದರಿ ರೀತಿಯಲ್ಲಿ ಪ್ರಗತಿ ಸಾಧಿಸಲು ಅವಕಾಶ ನೀಡಬೇಕೆಂದು ಔರಾದ(ಬಿ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಭು.ಬಿ ಚವ್ಹಾಣ ತಿಳಿಸಿದರು.
ಕಮಲನಗರ ತಾಲ್ಲೂಕಿನ ಠಾಣಾಕುಶನೂರ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷ ಔರಾದ ಮಂಡಲ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಮೂರು ಅವಧಿಗೆ ಶಾಸಕನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಕೂಡ ಕ್ಷೇತ್ರದ ನಾಲ್ಕು ಲಕ್ಷ ಜನತೆಯನ್ನು ದೇವರಂತೆ ಕಾಣುತ್ತೇನೆ, ಗೌರವಿಸುತ್ತೇನೆ. ಅವರನ್ನು ಪರಿವಾರದ ಸದಸ್ಯರಂತೆ ನೋಡುತ್ತೇನೆ. ಜನರ ಸುರಕ್ಷತೆ ನನ್ನ ಕರ್ತವ್ಯ. ಅದನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಅಭಿವೃದ್ಧಿ ಕೆಲಸಗಳ ಜೊತೆಗೆ ಕಷ್ಟವೆಂದು ಬರುವ ಎಲ್ಲರಿಗೂ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಅಭಿವೃದ್ಧಿಗೆ ಪೂರಕವಾಗಿರುವ ಶಿಕ್ಷಣ ಏಳಿಗೆಯಾಗಬೇಕು. ಕ್ಷೇತ್ರದ ಯುವಕರು ಉತ್ತಮ ಶಿಕ್ಷಣ ಪಡೆದು ಐ.ಎ.ಎಸ್, ಐಪಿಎಸ್, ವೈದ್ಯ ವೃತ್ತಿಯಂತಹ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸನ್ಮಾನಿಸಿ ಅವರ ಮನೋಬಲ ವೃದ್ಧಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಇದರೊಟ್ಟಿಗೆ ಶಿಕ್ಷಕರು ಉತ್ತಮವಾಗಿ ಕೆಲಸ ಮಾಡುವಂತಾಗಲು ಶಿಕ್ಷಕರಿಗೆ ಸನ್ಮಾನಿಸಲಾಗುತ್ತದೆ. ಇದರಿಂದಾಗಿ ಫಲಿತಾಂಶ ಸುಧಾರಣೆಯಾಗಿದೆ. ಹೀಗೆ ಎಲ್ಲ ರಂಗಗಳಲ್ಲಿ ಪ್ರಗತಿಯಾಗಬೇಕು ಎನ್ನುವುದೇ ನನ್ನ ಸದಾಶಯವಾಗಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ದಿ ವಿಷಯಗಳನ್ನು ಮುಂದಿಟ್ಟುಕೊಂಡು ಜನತೆಯ ಮುಂದೆ ಹೋಗುತ್ತಿದ್ದೇನೆ. ಔರಾದ(ಬಿ) ಕ್ಷೇತ್ರದ ಜನತೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಎಲ್ಲೆಡೆಯೂ ಬಿಜೆಪಿಯ ಪರವಾದ ಅಲೆ ಕಾಣಿಸುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕರಾದ ಗುಂಡಪ್ಪ ವಕೀಲ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಔರಾದ(ಬಿ) ಕ್ಷೇತ್ರಕ್ಕೆ ಯಾವಾಗಲೂ ಹೊರಗಿನ ಅಭ್ಯರ್ಥಿಯನ್ನೇ ನೀಡಿದೆ. ಇದನ್ನು ನಾನು ಸದಾ ಖಂಡಿಸಿದ್ದೇನೆ. ಕಳೆದ ಚುನಾವಣೆಯಲ್ಲಿಯೂ ಕ್ಷೇತ್ರಕ್ಕೆ ಸಂಬಂಧವಿಲ್ಲದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಿತ್ತು. ಈಗಲೂ ಬೆಂಗಳೂರಿನ ನಿವಾಸಿಯಾಗಿರುವ ವ್ಯಕ್ತಿ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಕ್ಷೇತ್ರದ ಬಗ್ಗೆ ಏನೂ ಗೊತ್ತಿಲ್ಲ. ಮೇಲಾಗಿ ವಯೋನಿವೃತ್ತಿಯಾಗಿ 8-10 ವರ್ಷಗಳಾಗಿರುವುದರಿಂದ ಹುರುಪಿನಿಂದ ಕ್ಷೇತ್ರದಲ್ಲಿ ಓಡಾಡುವ ಶಕ್ತಿಯೂ ಅವರಲ್ಲಿಲ್ಲ. ಇವರು ಚುನಾವಣೆ ನಂತರ ಕ್ಷೇತ್ರದ ಜನತೆಯ ಕೈಗೆ ಸಿಗುವುದು ಬಹಳ ಕಷ್ಟ. ಹಾಗಾಗಿ ಪ್ರಬುದ್ಧ ಮತದಾರರು ಈ ಬಗ್ಗೆ ಯೋಚಿಸಬೇಕು. ಸದಾ ಜನರೊಂದಿಗೆ ಇರುವ ಪ್ರಭು.ಬಿ ಚವ್ಹಾಣ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಗಿರುವ ಸಾಧನೆಗಳನ್ನು ಪರಿಗಣಿಸಿ ಮತದಾನ ಮಾಡಬೇಕು. ಕಾರ್ಯಕರ್ತರು ಗ್ರಾಮದಲ್ಲಿರುವ ಕಲಹಗಳನ್ನು ಚುನಾವಣೆಗೆ ಎಳೆದು ತರಬೇಡಿ. ಕ್ಷೇತ್ರ ಒಳಗೊಂಡು ನಾಡಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಗುಜರಾತ್‌ನ ಮಾಜಿ ಶಾಸಕ ಅಮಿತ್ ಚೌಧರಿ, ನವದೆಹಲಿಯ ರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆಯ ಅನಂತ ಬಿರಾದಾರ, ಮಹಾರಾಷ್ಟ್ರದ ಶಿವಾನಂದ ಹೈಬತಪೂರೆ, ಶರಣು ಹಣಮಶೆಟ್ಟಿ, ಪ್ರವೀಣ ಕಾರಭಾರಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖಂಡರಾದ ಗಣೇಶ ದಾದಾ ಹಕ್ಕೆ, ಬಾಪುರಾವ ರಾಠೋಡ್, ಅಮೃತರಾವ ವಟಗೆ, ವಸಂತ ಬಿರಾದಾರ, ಸುರೇಶ ಭೋಸ್ಲೆ, ಸಚಿನ್ ರಾಠೋಡ, ಅರಹಂತ ಸಾವಳೆ, ಕಿರಣ ಪಾಟೀಲ, ಅಶೋಕ ಮೇತ್ರೆ, ಗಿರೀಶ ವಡೆಯರ್, ಗಣಪತರಾವ ಕೋಟೆ, ವೆಂಕಟರಾವ ಡೊಂಬಾಳೆ, ನಾರಾಯಣರಾವ ಬಿರಾದಾರ, ಗೋವಿಂದ ಪಾಟೀಲ, ಲಾಲ್ ಅಮರ್, ವೈಜಿನಾಥ ಬೋಚರೆ, ಮೋಹನ ಪಾಟೀಲ, ದೇವಪ್ಪ ತಳವಾಡೆ, ಶಿವಕುಮಾರ, ಕಲೀಂ, ರಾಜಕುಮಾರ ಖೇಮಶೆಟ್ಟಿ, ಗೋಪಾಳ ಬಂಡೆ, ಗೌಸೋದ್ದಿನ್, ತಬರೇಜ್, ಅರವಿಂದ ಮೇತ್ರೆ, ಯೋಗೇಶ ಬಿರಾದಾರ, ಬಾಲಾಜಿ ಬಾಘಮಾರೆ ಹಾಗೂ ಇತರರು ಉಪಸ್ಥಿತರಿದ್ದರು.