ಔರಾದ: ತಾಲೂಕು ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಬಿರಾದಾರ್ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವಶಿಂಧೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಬಿರಾದಾರ, ಪ್ರಭು ಚವ್ಹಾಣ ಪಶುಸಂಗೋಪನೆ ಸಚಿವ ಖಾತೆಯಲ್ಲಿದ್ದರೂ ಜಿಲ್ಲೆಯ ಜಾನುವಾರಗಳಿಗೆ ಚರ್ಮಗಂಟು ರೋಗಕ್ಕೆ ಔಷಧಿ ಸಿಗಲಿಲ್ಲ ಎಂದು ದೂರಿದರು.
ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರಿಗೆ ಸಂಕಷ್ಟ ಬಂದಾಗಲೂ ಕ್ಷೇತ್ರದ ರೈತರ ಸಮಸ್ಯೆ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿಲ್ಲ. ಕ್ಷೇತ್ರದ ಸಮಸ್ಯೆಗಳು ಆಧಿವೇಶನದಲ್ಲಿ ಚರ್ಚಿಸದ ಕಾರಣ ಕ್ಷೇತ್ರದ ಗಂಭೀರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಜವಾಬ್ದಾರಿ ನಿರ್ವಹಿಸಿದ್ದೇನೆ. ಆಗಲೂ ರೈತರ ಸಮಸ್ಯೆಗಳು ಪ್ರಭು ಚವ್ಹಾಣ ಅವರ ಬಳಿ ಹೇಳಿದರೂ ಸ್ಪಂದಿಸಿಲ್ಲ. ಚವ್ಹಾಣ ಅವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತಿವೃಷ್ಟಿ ಬೆಳೆ ಪರಿಹಾರ ಇನ್ನೂ ಅನೇಕ ರೈತರಿಗೆ ಬಂದಿಲ್ಲ. ಪರಿಹಾರದ ಬಗ್ಗೆ ಕಂದಾಯ ಸಚಿವ ಆರ್. ಅಶೋಕ, ಪ್ರಭು ಚವ್ಹಾಣ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದೇವೆ. ಆದರೆ ಚವ್ಹಾಣ ನಿರ್ಲಕ್ಷ್ಯದಿಂದ ಪರಿಹಾರ ಬಂದಿಲ್ಲ ಎಂದು ಆರೋಪ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಚನ್ನಬಸಪ್ಪ ಬಿರಾದಾರ ಕೌಠಾ ಅವರು ಆಗಮಿಸಿದರಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಕ್ಷದ ಅಭ್ಯರ್ಥಿಯ ಗೆಲುವು ಸಾಧಿಸಲು ತನುಮನ ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ನೇಹರು ಪಾಟೀಲ, ಶಿವರಾಜ ದೇಶಮುಖ, ಡಾ. ರತಿಕಾಂತ ಮಜಿಗೆ, ಶರಣಪ್ಪ ಬಲ್ಲೂರ, ಡಾ. ಫೈಯಾಜ್ ಅಲೀ, ಸಾಯಿಕುಮಾರ ಘೋಡಕೆ, ಧನಾಜಿ ಜಾಧವ, ಶಿವಕುಮಾರ ಪಾಟೀಲ, ರಘುನಾಥ ಜಾಧವ ಸೇರಿದಂತೆ ಅನೇಕರಿದ್ದರು.