ಔರಾದ: ಲಿಂಗಾಯತ ಸಮಾಜವನ್ನು ಪ್ರಭು ಚವ್ಹಾಣಗೆ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಮುಖಂಡರಾದ ಬಸವರಾಜ ದೇಶಮುಖ್ ವಡಗಾಂವ ಹೇಳಿದರು.
ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲ ಲಿಂಗಾಯತರು ಒಂದಾಗಿದ್ದಾರೆ. ಜಾತಿಗೆ ಕಡೆಗಣನೆ ಮಾಡುವ ಬಿಜೆಪಿಯ ಪ್ರಭು ಚವ್ಹಾಣಗೆ ಪಾಠ ಕಲಿಸಲು ಎಲ್ಲರೂ ಕೈಜೋಡಿಸಿದ್ದಾರೆ ಎಂದರು. ಮುಖಂಡ ಬಸವರಾಜ ದೇಶಮುಖ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಲಿಂಗಾಯತರ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಲಿಂಗಾಯತರು ಬಿಜೆಪಿಗೆ ಈ ಸಲ ಮತ ಹಾಕಬೇಡಿ, ಲಿಂಗಾಯತರಿಗೆ ಬಿಜೆಪಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಸ್ವಾಮಿ ಮಾತನಾಡಿ, ಪ್ರಭು ಚವ್ಹಾಣಗೆ ಲಿಂಗಾಯತ ಮತ ಕೆಳುವ ನೈತಿಕತೆಯಿಲ್ಲ, ನನ್ನ ಮೇಲೆ ಪ್ರಭು ಚವ್ಹಾಣ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಈಗ ಕಾಂಗ್ರೆಸ್ ಬಂದರೆ ಜಾತಿನಿಂದನೆ ಪ್ರಕರಣ ಹೆಚ್ಚಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ಅವಧಿಯಲ್ಲಿ ಬಂಜಾರ ಜನರಿಗೆ ಬಳಿಸಿಕೊಂಡು ಲಿಂಗಾಯತರ ಮೇಲೆ ಅನೇಕ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದರು.
ಲಿಂಗಾಯತರಿಗೆ ಅನ್ಯಾಯ:
ಪ್ರಭು ಚವ್ಹಾಣ ಲಿಂಗಾಯತರಿಗೆ ಲಿಂಗಾಣಿ ಎಂದು ಲೇವಡಿ ಮಾಡುತ್ತಾರೆ ಎಂದು ಶರಣಪ್ಪ ಪಾಟೀಲ್, ಸಂಗು ಪಟೇಲ್ ದೂರಿದ್ದಾರೆ. ಪಟ್ಟಣದಲ್ಲಿ 2008ರಲ್ಲಿ ಲಿಂಗಾಯತ ಭವನ ಕಟ್ಟಡ ಕಾಮಗಾರಿ ಆರಂಭವಾದರೂ ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ. ಆದರೆ 2018ರಲ್ಲಿ ಬಂಜಾರ ಭವನ ಉದ್ಘಾಟಿಸಿ ಇಲ್ಲಿಯವರೆಗೆ ಭವ್ಯವಾಗಿ ನಿರ್ಮಾಣವಾಗಿದೆ. ಬಂಜಾರ ಭವನ ನಿರ್ಮಾಣದಲ್ಲಿ ತೋರಿಸಿದ ಆಸಕ್ತಿ ಲಿಂಗಾಯತ ಭವನ ನಿರ್ಮಾಣದಲ್ಲಿ ಏಕಿಲ್ಲ ಎಂದು ಶರಣಪ್ಪ ಪಾಟೀಲ ಪ್ರಶ್ನಿಸಿದರು.
ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ವಾರ್ಡ್ 15 ಮತ್ತು 16ರಲ್ಲಿ ಸಾಮಾನ್ಯ ಮೀಸಲಾತಿಯಿದ್ದರೂ ಲಿಂಗಾಯತ, ಮರಾಠರಿಗೆ ಟಿಕೆಟ್ ನೀಡಿಲ್ಲ. ಲಂಬಾಣಿ ಜನರಿಗೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಹೋರಾಟ ಮಾಡುವ ಅನಿಲ ನಿರ್ಮಳೆ, ಸೋಮನಾಥ ಮುಧೋಳ ಸೇರಿದಂತೆ ಅನೇಕರ ಮೇಲೆ ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ. ರಾಜಕುಮಾರ ಎಡವೆ, ರಾಜು ಶೆಟಕಾರ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದರು.
ಈ ವೇಳೆ ಮಾಜಿ ತಾಪಂ ಉಪಾಧ್ಯಕ್ಷ ನೆಹರು ಪಾಟೀಲ, ಪ್ರಶಾಂತ ಕಾಡೋದೆ, ಅನಿಲ ನಿರ್ಮಳೆ, ರಾಜಕುಮಾರ ಎಡವೆ, ಅನಿಲ ಹೇಡೆ, ಓಂಬಸವ ಪಟ್ಟೆ, ಬಬ್ಬು ಪಾಟೀಲ, ರವಿ ದೇವರೆ ಕೌಠಾ ಸೇರಿದಂತೆ ಅನೇಕರಿದ್ದರು.