ಔರಾದ್: ಔರಾದ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಾ. ಭೀಮಸೇನ್‌ರಾವ ಶಿಂಧೆ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಔರಾದನ ಆರಾಧ್ಯ ದೈವ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅಭಿಷೇಕ, ಅರ್ಚನೆ, ವಿಶೇಷ ಪೂಜೆ ಸಲ್ಲಿಸಿದರು. ಔರಾದ(ಬಾ) ಹಾಗೂ ಕಮಲನಗರ ತಾಲ್ಲೂಕಿನ ಹಳ್ಳಿ ಹಳ್ಳಿಗಳಿಂದ ಜನತೆ ಔರಾದಗೆ ಆಗಮಿಸಿದ್ದರು. ಮೆರವಣಿಗೆ ಸಂದರ್ಭದಲ್ಲಿ ಎಪಿಎಂಸಿ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ಜನಸಾಗರ ಕಂಡುಬಂತು. ಎಲ್ಲಿ ನೋಡಿದರಲ್ಲಿ ಕಾಂಗ್ರೆಸ್ ಧ್ವಜ ರಾರಾಜಿಸಿದವು. ತಮಟೆ ವಾದನ, ಡೊಳ್ಳು ಕುಣಿತ ಹಾಗೂ ನೃತ್ಯ ಮೆರವಣಿಗೆಗೆ ರಂಗು ನೀಡಿದವು.
ಯುವಕರು, ಹಿರಿಯರು ತಮಟೆ ವಾದನಕ್ಕೆ ಹೆಜ್ಜೆ ಹಾಕಿ ಸಂತೋಷಪಟ್ಟರು. ನಂತರ ಅಸಂಖ್ಯಾತ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೆ ತೆರಳಿ ನಂತರ ತಹಸೀಲ್ದಾರ ಕಛೇರಿಯಲ್ಲಿ ರಿಟರ್ನಿಂಗ್ ಆಫೀಸರ್ ಅವರಿಗೆ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅರವಿಂದ ಅರಳಿ, ಮಾಜಿ ಎಂಎಲ್‌ಸಿ ವಿಜಯ ಸಿಂಗ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಶ್ರೀಕಾಂತ ಸ್ವಾಮಿ, ರತಿಕಾಂತ ಮಜ್ಜಿಗೆ, ಗೀತಾ ಚಿದ್ರಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.