ಔರಾದ: ನಾಡಿನ ಸರ್ವಾಂಗೀಣ ಅಭಿವೃದ್ದಿ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ಉಳಿಸಿ ಬೆಳೆಸುವಲ್ಲಿ ವೀರಶೈವ-ಲಿಂಗಾಯತರ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯವಾಗಿದೆ. ಇಂಥ ಶ್ರೇಷ್ಠ ಸಮಾಜವನ್ನು ಅವಮಾನಿಸುವ ಕೆಲಸ ಮಾಡಿರುವ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.
ಲಿಂಗಾಯತರು ಭ್ರಷ್ಟರು, ಲಿಂಗಾಯತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಪ್ಟ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಇದು ಮಹಾನ್ ಪರಂಪರೆಯುಳ್ಳ ವೀರಶೈವ, ಲಿಂಗಾಯತ ಸಮಾಜಕ್ಕೆ ಮಾಡಿದ ಅವಮಾನ. ಇದನ್ನು ನಾನು ತೀವ್ರವಾಗಿ ಖಂಡಿಸುವೆ ಎಂದು ಹೇಳಿದ್ದಾರೆ.
ನಾಡಿಗೆ ವೀರಶೈವ ಲಿಂಗಾಯತ ಸಮಾಜ ಅಪರೂಪದ ಕೊಡುಗೆ ನೀಡುತ್ತಿದೆ. ಸಮಾಜದ ಮಠಗಳು ಅನ್ನ, ಅಕ್ಷರ, ಆಶ್ರಯದಂಥ ತ್ರಿವಿಧ ದಾಸೋಹದ ಮೂಲಕ ವಿಶಿಷ್ಟ ಕೊಡುಗೆ ನೀಡುತ್ತಿವೆ. ಸಮಾಜಕ್ಕೆ ಮಠಾಧೀಶರು ಸದಾ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಸಮಾಜದ ಬಗ್ಗೆ ಎಲ್ಲರಿಗೂ ಅಪಾರ ಗೌರವ, ನಂಬಿಕೆ, ಅಭಿಮಾನವಿದೆ. ಇಂಥ ಸಮಾಜಕ್ಕೆ ಅವಮಾನಿಸಿದ ಕಾಂಗ್ರೆಸ್ ಗೆ ಜನ ಮತ್ತೊಮ್ಮೆ ಪಾಠ ಕಲಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡಿದೆ. ರಾಜ್ಯದಲ್ಲಿ ಬಿಜೆಪಿಯ ಪರವಾದ ಅಲೆಯಿದೆ. ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದು, ಬಿಜೆಪಿಯನ್ನು ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಮತ್ತು ಜಿಲ್ಲೆಯಲ್ಲಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು. ಈ ಸಂದರ್ಭದಲ್ಲಿ ಗುಜರಾತಿನ ಮಾಜಿ ಶಾಸಕರಾದ ಅಮಿತ್ ಚೌಧರಿ, ಉದಗೀರ ಮಾಜಿ ಶಾಸಕರಾದ ಗೋವಿಂದ ಕೇಂದ್ರೆ, ಮುಖಂಡರಾದ ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ ಹಾಗೂ ಇತರರು ಇದ್ದರು.