ಔರಾದ: ಔರಾದ(ಬಾ) ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸಚಿವರಾದ ಪ್ರಭು ಚವ್ಹಾಣ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಕುಟುಂಬದ ಸದಸ್ಯರು ಹಾಗೂ ಆಪ್ತರ ಜೊತೆಗೆ ಔರಾದನ ಆರಾಧ್ಯ ದೈವ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಅಭಿಷೇಕ, ಅರ್ಚನೆ, ವಿಶೇಷ ಪೂಜೆ ಸಲ್ಲಿಸಿದರು. ಔರಾದ(ಬಾ) ಹಾಗೂ ಕಮಲನಗರ ತಾಲ್ಲೂಕಿನ ಹಳ್ಳಿ ಹಳ್ಳಿಗಳಿಂದ ಜನತೆ ಔರಾದಗೆ ಆಗಮಿಸಿದ್ದರು. ಮೆರವಣಿಗೆ ಸಂದರ್ಭದಲ್ಲಿ ಎಪಿಎಂಸಿ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ಜನಸಾಗರ ಕಂಡು ಬಂದಿತು.
ತಮಟೆ ವಾದನ, ಡೊಳ್ಳು ಕುಣಿತ ಹಾಗೂ ಬಂಜಾರಾ ನೃತ್ಯ ಮೆರವಣಿಗೆಗೆ ರಂಗು ನೀಡಿದವು. ಯುವಕರು, ಹಿರಿಯರು ತಮಟೆ ವಾದನಕ್ಕೆ ಹೆಜ್ಜೆ ಹಾಕಿ ಸಂತೋಷಪಟ್ಟರು. ನಂತರ ಅಸಂಖ್ಯಾತ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೆ ತೆರಳಿ ನಂತರ ತಹಸೀಲ್ದಾರ ಕಛೇರಿಯಲ್ಲಿ ರಿಟರ್ನಿಂಗ್ ಆಫೀಸರ್ ಅವರಿಗೆ ಉಮೇದುವಾರಿಕೆಯನ್ನು ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವ ಪ್ರಭು.ಬಿ ಚವ್ಹಾಣ ಅವರು, ಅಮರೇಶ್ವರ ದೇವರ ಅಶೀರ್ವಾದ ಪಡೆದು ಜನತೆಯೊಂದಿಗೆ ಅದ್ದೂರಿ ಮೆರವಣಿಗೆ ಮುಖಾಂತರ ತೆರಳಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ ಮೂರು ಅವಧಿಗೆ ಜನತೆ ಆಶೀರ್ವಾದ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡ್‌ನೊಂದಿಗೆ ಜನತೆಯ ಬಳಿ ಹೋಗುತ್ತಿದ್ದೇನೆ. ಈ ಬಾರಿಯೂ ಉತ್ತಮ ಲೀಡ್‌ನೊಂದಿಗೆ ಜನ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ನಾಂದೇಡ ಜಿಲ್ಲೆಯ ಸಂಸದರಾದ ಪ್ರತಾಪ ಪಾಟೀಲ ಚಿಕ್ಲೆಕರ್ ಅವರು ಮಾತನಾಡಿ, ಔರಾದನಲ್ಲಿ ಅಪಾರ ಪ್ರಮಾಣದ ಜನತೆ ಸೇರಿರುವುದು ಪ್ರಭು ಚವ್ಹಾಣ ಮತ್ತೊಮ್ಮೆ ಜಯ ಗಳಿಸುವುದು ಖಚಿತ ಎನ್ನುವ ಸಂದೇಶವನ್ನು ಸಾರುತ್ತಿದೆ. ನಾಮಪತ್ರ ಸಲ್ಲಿಕೆಗೆ ಇಷ್ಟೊಂದು ಜನ ಸೇರುವುದು ಪ್ರಭು ಚವ್ಹಾಣ ಅವರಿಗೆ ಜನಬೆಂಬಲ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಮಾತನಾಡಿ, ಸಚಿವ ಪ್ರಭು ಚವ್ಹಾಣ ಅವರು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಇಂತಹ ಹಲವು ಐತಿಹಾಸಿಕ ಕೆಲಸಗಳನ್ನು ಮಾಡಿದ್ದಾರೆ. ಸದಾ ಜನರೊಟ್ಟಿಗೆ ಇರುವ ಅಪರೂಪದ ನಾಯಕರಾಗಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸುವುದು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಉದಗೀರ ಮಾಜಿ ಶಾಸಕ ಗೋವಿಂದ ಕೇಂದ್ರೆ, ಮುಖಂಡರಾದ ವಸಂತ ಬಿರಾದಾರ, ರೌಫುದ್ದೀನ್ ಕಛೇರಿವಾಲೆ, ಅಮರನಾಥ ಪಾಟೀಲ, ಶಿವರಾಜ ಗಂದಗೆ, ವೀರಣ್ಣಾ ಕಾರಬಾರಿ, ಅರಹಂತ ಸಾವಳೆ, ವಿಜಯಕುಮಾರ ಪಾಟೀಲ ಗಾದಗಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.