ಔರಾದ: ಬಿಜೆಪಿ ವಿಜಯ ಸಂಕಲ್ಪ ಯಾತ್ರಾ ರಥಕ್ಕೆ ಶನಿವಾರ ಔರಾದ ತಾಲೂಕಿನ ವಡಗಾಂವ ಗ್ರಾಮದಲ್ಲಿ ಸಹಸ್ರಾರು ಕಾರ್ಯಕರ್ತರು, ಮುಖಂಡರು ಭವ್ಯ ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಭಾಲ್ಕಿಯಿಂದ ಆಗಮಿಸಿದ ಯಾತ್ರೆಗೆ ಗ್ರಾಮದ ಶರಣ ಬಸವ ಕಲ್ಯಾಣ ಮಂಟಪದಿಂದ, ಬಸವೇಶ್ವರ ಮಂದಿರ, ಅಂಬೇಡ್ಕರ್ ವೃತ, ವೀರಭದ್ರೇಶ್ವರ ಮಂದಿರದವರೆಗೆ ಬೃಹತ್ ರೋಡ್ ಶೋ ನಡೆಯಿತು. ಯಾತ್ರೆಯುದ್ದಕ್ಕೂ ಬಿಜೆಪಿ ಧ್ವಜಗಳು ರಾರಾಜಿಸಿದವು. ಡಿಜೆ ಸೌಂಡ್‌ನೊಂದಿಗೆ ಯುವಕರು ಮೋದಿ ಮೋದಿ, ಬಿಜೆಪಿ ಬಿಜೆಪಿ ಎಂದು ಜೈಘೋಷ ಮೊಳಗಿಸಿದರು.
ಕುಂಭ ಹೊತ್ತ ಮಹಿಳೆಯರು, ಲಂಬಾಣಿ ಮಹಿಳೆಯರ ಕುಣಿತ, ಡೊಳ್ಳು, ವಾದ್ಯ ಮೇಳ ತಂಡಗಳ ಪ್ರದರ್ಶನ ಶೋಭೆ ನೀಡಿದವು. ರಥಯಾತ್ರೆ ವಾಹನದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ, ಮಾಲೀಕಯ್ಯ ಗುತ್ತೇದಾರ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಒಳಗೊಂಡು ಅನೇಕ ಗಣ್ಯರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.