ಔರಾದ: ಔರಾದ ವಿಧಾನಸಭಾ ಕ್ಷೇತ್ರದ ಸಂತಪುರ, ವಡಗಾಂವ ದೇ, ಜಂಬಗಿ, ಚಿಕ್ಲಿ ಜೆ, ಮಾಣಿಕ್ ತಾಂಡ, ಘಾಮ ತಾಂಡದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಜೈಸಿಂಗ್ ರಾಠೋಡ್ ರವರು ಶುಕ್ರವಾರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಈ ಚುನಾವಣೆಯಲ್ಲಿ ನಮ್ಮನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ, ನಾವು ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡಲಿದ್ದೇವೆ. ರೈತರ ಬೋರ್‌ವೆಲ್‌ಗಳಿಗೆ ದಿನದ ಇಪ್ಪತ್ನಾಲ್ಕು ತಾಸು ವಿದ್ಯುತ್ ಪೂರೈಕೆ ಮಾಡಲಿದ್ದೇವೆ ಎಂದರು.
ನಾವು ಅಧಿಕಾರಕ್ಕೆ ಬಂದ ಕೂಡಲೇ ರೈತರಿಗೆ ಪ್ರತಿ ಎಕರೆಗೆ ಹತ್ತು ಸಾವಿರ ರೂ.ದಂತೆ ಹತ್ತು ಎಕರೆಯವರೆಗೂ ಕೃಷಿ ಖರ್ಚಿಗಾಗಿ ಸಹಾಯಧನ ನೀಡುತ್ತೇವೆ. ವಿವಿಧ ವೇತನಗಳನ್ನು ಹೆಚ್ಚಿಸುತ್ತೇವೆ. ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡುತ್ತೇವೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಜನಪರ ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ.
ಮಹತ್ವದ ಜನಪರ ಯೋಜನೆಗಳ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಕ್ಷೇತ್ರದ ಮತ್ತು ರಾಜ್ಯದ ಮತದಾರರು ಜೆಡಿಎಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತ ನೀಡಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಜೈಸಿಂಗ್ ರಾಠೋಡ್ ಮನವಿ ಮಾಡಿದರು.
ಚುನಾವಣಾ ಪ್ರಚಾರದ ನಡುವೆ ಅವರು ಗ್ರಾಮಗಳ ಮಂದಿರ, ಚರ್ಚ್, ದರ್ಗಾಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕಿರಣ ಪಾಟೀಲ, ಬಾಳು ರಾಠೋಡ, ಮಾಣಿಕ್ ಚೌಹಾಣ, ಶಿವಕುಮಾರ ಸೋರಳ್ಳೆ, ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಇತರರು ಹಾಜರಿದ್ದರು.