ಔರಾದ : ಉತ್ತಮ ಜನಸೇವೆ ಮಾಡುತ್ತಿರುವ ಪ್ರಭು.ಬಿ ಚವ್ಹಾಣ ಅವರು ನಾಲ್ಕನೇ ಅವಧಿಗೆ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ನಾರಾಯಣ ರಾಣೆ ಅವರು ತಿಳಿಸಿದರು.
ಚುನಾವಣಾ ಪ್ರಚಾರಕ್ಕಾಗಿ ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿರುವ ಅವರು ಮಂಗಳವಾರ ಕಮಲನಗರದಲ್ಲಿ ರೋಡ್ ಶೋಗೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೂರು ಅವಧಿಗೆ ಶಾಸಕರಾಗಿ ಮತ್ತು ಸಚಿವರಾಗಿಯೂ ಸೇವೆ ಸಲ್ಲಿಸಿರುವ ಪ್ರಭು ಚವ್ಹಾಣ ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ನಿರಾಯಾಸವಾಗಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ನಿರ್ದೇಶನದಂತೆ ಚುನಾವಣಾ ಪ್ರಚಾರಕ್ಕಾಗಿ ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ್ದು ಎರಡು ದಿನ ಇಲ್ಲಿಯೇ ಉಳಿದು ಬಿಜೆಪಿ ಅಭ್ಯರ್ಥಿ ಪ್ರಭು.ಬಿ ಚವ್ಹಾಣ ಅವರ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದರು. ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರಗಳು ಕರ್ನಾಟಕ ಸೇರಿ ದೇಶಾದ್ಯಂತ ಉತ್ತಮ ಆಡಳಿತ ನೀಡಿವೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ ಎಂದು ಹೇಳಿದರು. ಚುನಾವಣಾ ಪ್ರಚಾರಕ್ಕೆ ವಿಷಯಗಳಿಲ್ಲದೇ ವಿರೋಧ ಪಕ್ಷಗಳು ಇಲ್ಲಸಲ್ಲದ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.