ಔರಾದ: ಸಚಿವ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ಕ್ಷೇತ್ರದ ಸಂತಪೂರ, ಚಟ್ನಾಳ, ಜೀರ್ಗಾ(ಕೆ), ಜೀರ್ಗಾ(ಬಿ), ಶೆಂಬೆಳ್ಳಿ, ಮುಸ್ತಾಪೂರ, ಕೌಡಗಾಂವ, ಬಲ್ಲೂರ(ಜೆ), ಕೌಠಾ(ಕೆ), ಕೌಠಾ(ಬಿ) ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು. ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ವಿತರಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.
ಕ್ಷೇತ್ರದ ಜನತೆ ಸಾಕಷ್ಟು ಪ್ರೀತಿ, ವಿಶ್ವಾಸ ನೀಡಿದ್ದಾರೆ. ಜನತೆ ನೀಡಿರುವ ಆಶೀರ್ವಾದದಿಂದಾಗಿ ನಾನು ಮೂರು ಅವಧಿಗೆ ಶಾಸಕನಾಗಿ ಮತ್ತು ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ ಕ್ಷೇತ್ರದ ಬೆಳವಣಿಗೆಗೆ ಪ್ರಯತ್ನಿಸಿದ್ದೇನೆ. ಔರಾದ(ಬಿ) ಕ್ಷೇತ್ರದಲ್ಲಿ ಯಾವುದೇ ರೀತಿಯ ಕಲಹಗಳಿಗೆ ಆಸ್ಪದ ನೀಡದೇ ಜನತೆ ಸುಖ ಶಾಂತಿಯಿಂದ ಜೀವನ ನಡೆಸುವ ವಾತಾವರಣ ನಿರ್ಮಿಸಲಾಗಿದೆ. ಇದನ್ನು ಕಾಪಾಡಿಕೊಂಡು ಹೋಗಬೇಕಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಹಾಕಿಕೊಂಡಿರುವ ಯೋಜನೆಗಳನ್ನು ಸಾಕಾರಗೊಳಿಸಲು, ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲು ಹೆಚ್ಚು ಮತಗಳ ಅಂತರದಿಂದ ತಮ್ಮನ್ನು ಗೆಲ್ಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ಮಾರುತಿ ಚವ್ಹಾಣ, ದೊಂಡಿಬಾ ನರೋಟೆ, ವಿಜಯಕುಮಾರ ಪಾಟೀಲ ನಾಗೂರ, ಶಿವಕುಮಾರ ಪಾಂಚಾಳ, ಸಚಿನ ರಾಠೋಡ್, ಸಂತೋಷ ಪಾಟೀಲ, ಬಾಲಾಜಿ ಠಾಕೂರ, ಮಹಾದೇವ ತರನಾಳೆ, ಶ್ರೀಮಂತ ಪಾಟೀಲ, ನಾಗಶೆಟ್ಟಿ ಶಂಬೆಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.