ಔರಾದ: ಚುನಾವಣೆ ಪ್ರಚಾರಕ್ಕೆ ಹೋದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ಗೆ ಗ್ರಾಮಸ್ಥರು ದಿಗ್ಧಂಧನ ಹಾಕಿ ಪ್ರಶ್ನೆಗಳ ಮಳೆಯನ್ನೇ ಸುರಿಸಿದ ಘಟನೆ ಔರಾದ್ ವಿಧಾನ ಸಭಾ ಕ್ಷೇತ್ರದ ಬೆಳಕುಣಿ ಸಿ ಗ್ರಾಮದಲ್ಲಿ ನಡೆದಿದೆ. ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮತಯಾಚನೆಗೆ ತಮ್ಮ ಬೆಂಬಲಿಗರ ಜೊತೆ ತೆರಳಿದ ಸಚಿವ ಪ್ರಭು ಚವ್ಹಾಣ್ ಗೆ ಗ್ರಾಮಸ್ಥರು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮೊಬ್ಬರ ಅಭಿವೃದ್ಧಿ ಆದರೆ ಮುಗೀತೇ? ಗ್ರಾಮಕ್ಕೆ ಕೊಟ್ಟ ಕೊಡುಗೆ ಏನು? ಇವಾಗ ನೆನಪಾಯಿತಾ ನಮ್ಮೂರು? ಎಂದು ಗ್ರಾಮದ ಹಲವರು ನಡು ರಸ್ತೆಯಲ್ಲಿಜಾಡಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ ಕಂಡು ಅಲ್ಲಿಂದ ಚವ್ಹಾಣ್ ಕಾಲ್ಕಿತ್ತಲು ಪ್ರಯತ್ನಿಸಿದರೂ ಜನರು ದಾರಿ ಬಿಡಲಿಲ್ಲ. ಬಿಜೆಪಿ ಮುಖಂಡರ ಹಾಗೂ ಪೊಲೀಸರ ಸಹಾಯದಿಂದ ಪ್ರಭು ಚವ್ಹಾಣ ಕಾರ್‌ನಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸದೇ ಕಾಲ್ಕಿತ್ತಿದ್ದಾರೆ. ಮೊದಲು ಇಲ್ಲಿಂದ ಓಡಿಸಿ ಎಂದು ಜನರು ಕೂಗಿದ್ದಾರೆ. ಸಚಿವ ಚವ್ಹಾಣ್ ಹಾಗೂ ಗ್ರಾಮಸ್ಥರ ನಡುವಿನ ಗಲಾಟೆ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.