ಔರಾದ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಯಾವುದೇ ಪಕ್ಷಗಳ ಗೆಲುವು ಸಾಧ್ಯವಿಲ್ಲ. ಬದಲಾಗಿ ಕ್ಷೇತ್ರದ ಸ್ವಾಭಿಮಾನಿ ಜನರ ಗೆಲುವಾಗಲಿದೆ. ಇದಕ್ಕೆ ನಿಮ್ಮೆಲ್ಲರ ಸತತ ಪರಿಶ್ರಮ, ನಿಸ್ವಾರ್ಥ ಸೇವೆ ಮತ್ತು ಆಶೀರ್ವಾದ ಬೇಕೆಂದು ರವೀಂದ್ರ ಸ್ವಾಮಿ ತಿಳಿಸಿದರು.
ಔರಾದ ಹಾಗೂ ಕಮಲನಗರ ತಾಲೂಕಿನ ಹುಲ್ಯಾಳ, ಕರಕ್ಯಾಳ, ನಾಗನಗೇರಾ, ನಿಂಗದಳ್ಳಿ, ಬೆಂಬ್ರಾ, ಹಸಿಬೇರಾ, ಗೌಂಡಾವ್ ಮತ್ತು ಖಂಡಿಕೇರಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಮಿಂಚಿನ ಸಂಚಾರಗೈದು ಜನರನ್ನುದ್ದೇಶಿಸಿ ಮಾತನಾಡಿದರು.
ಗ್ರಾಮಗಳಿಗೆ ಎಲ್ಲೇ ಹೋದರೂ ವಯಸ್ಸಾದ ಹಿರಿಯರು, ಯುವಕರು ಹಾಗೂ ತಾಯಂದಿರು ರವೀಂದ್ರ ಸ್ವಾಮಿ ಅವರಿಗೆ ಆಶೀರ್ವಾದ ಮಾಡಿದರು. ಈ ಬಾರಿ ನಿಮ್ಮ ಗೆಲುವು ಪಕ್ಕಾ ಎಂದು ಹಿರಿಯ ಅಜ್ಜಿಯೊಬ್ಬರೂ ಹೇಳುತ್ತಿರುವುದು ಸಭೀಕರ ಗಮನ ಸೆಳೆಯಿತು. ಭಾವನಾತ್ಮಕವಾಗಿ ಏಕತಾ ಫೌಂಡೇಶನ್ ಜೊತೆಗೆ ಕ್ಷೇತ್ರದ ಜನರು ಮಿಲನವಾಗುತ್ತಿದ್ದಾರೆ. ಇಲ್ಲಿ ಯಾವುದೇ ಪಕ್ಷಭೇದ, ಜಾತಿ ಭೇದ, ಮತಭೇದವಿಲ್ಲ. ಎಲ್ಲರೂ ಒಂದೇ ಎಂಬ ಸಂದೇಶ ಸಾರುವುದೇ ಏಕತಾ ಫೌಂಡೇಶನ್ ಉದ್ದೇಶವಾಗಿದೆ. ಹೀಗಾಗಿ ಕಳೆದ ಮೂರು ಅವಧಿಯಲ್ಲಿ ಸಾಕಷ್ಟು ಭೇದಭಾವಗಳನ್ನು ನೋಡಿದ್ದೇವೆ. ಜಾತಿ-ಮತಗಳ ಮಧ್ಯೆ ಕಿರಿಕಿರಿ ಉಂಟು ಮಾಡಿದ್ದನ್ನು ಕಂಡಿದ್ದೇವೆ. ಜನರು ಕೂಡಾ ಇವುಗಳನ್ನು ನೋಡಿ ನೋಡಿ ಬೇಸತ್ತಿದ್ದಾರೆ. ಹೀಗಾಗಿ ಈ ಬಾರಿ ಸ್ವಾಭಿಮಾನಿ ಸರ್ಕಾರವನ್ನು ಜಾರಿಗೆ ತರಲು ಶತಪ್ರಯತ್ನ ಮಾಡಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧನಾಗಿ ನಿಂತಿದ್ದೇನೆ ಎಂದು ರವೀಂದ್ರ ಸ್ವಾಮಿ ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮದ ನೂರಾರು ಜನರು ಹಾಜರಿದ್ದರು