ಔರಾದ: ಸ್ಥಳೀಯರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಸುಧಾಕರ ಕೊಳ್ಳುರ ಹೇಳಿದರು.
ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡಿದ ಸ್ಥಳೀಯರಿಗೆ ಔರಾದ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಬೇಕು ಅದನ್ನು ಬಿಟ್ಟು ಬೇರೆ ಮತಕ್ಷೇತ್ರದಿಂದ ಬಂದವರಿಗೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೇವಲ ಚುನಾವಣೆಗಾಗಿ ಕ್ಷೇತ್ರದಲ್ಲಿ ಓಡಾಡಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿರುವವರಿಗೆ ಟಿಕೆಟ್ ನೀಡಬಾರದು. ಇವರು ಚುನಾವಣೆಗಾಗಿ ಮಾತ್ರ ತಾಲೂಕಿಗೆ ಬರುತ್ತಿದ್ದಾರೆ ಚುನಾವಣೆ ಮುಗಿದ ನಂತರ ಕ್ಷೇತ್ರದಲ್ಲಿ ಯಾವತ್ತೂ ತಿರುಗಿಯು ನೋಡುವುದಿಲ್ಲ. ಪಕ್ಷ ಮೂರು ಬಾರಿಯೂ ಇದೇ ತರ ಬೇರೆ ಕಡೆಯಿಂದ ಬಂದವರಿಗೆ ಟಿಕೆಟ್ ನೀಡಿದೆ. ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದ ಕಡೆ ಮುಖವು ಮಾಡಿ ನೋಡಿಲ್ಲ ಎಂದರು.
ನಾನು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 14 ವರ್ಷಗಳಿಂದ ಕಾರ್ಯಕರ್ತನಾಗಿ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿ ಪಕ್ಷ ಸಂಘಟನೆ ಮಾಡಿದ್ದೇನೆ. ಜೊತೆಗೆ ಸ್ಥಳೀಯ ಶಾಸಕರ ಜನ ವಿರೋಧಿ ನೀತಿಯನ್ನು ಖಂಡಿಸುತ್ತಾ, ದುರಾಡಳಿತದ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಹಾಗಾಗಿ ನನಗೆ ಟಿಕೆಟ್ ನೀಡಬೇಕು ಇಲ್ಲವಾದರೆ ಸ್ಥಳೀಯವಾಗಿ ನಮಗಿಂತ ಹೆಚ್ಚಿನ ಪಕ್ಷ ಸಂಘಟನೆ ಯಲ್ಲಿ ತೊಡಗಿಕೊಂಡಿರುವ ಸ್ಥಳೀಯ ಮುಖಂಡರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡದೆ ಇರುವವರನ್ನು, ಬೇರೆ ಮತಕ್ಷೇತ್ರದಿಂದ ಬಂದವರಿಗೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಸ್ಥಳೀಯ ಟಿಕೆಟ್ ಆಕಾಂಕ್ಷಿ ಸುಧಾಕರ ಕೊಳ್ಳುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.