ಔರಾದ: ಔರಾದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಸೇರಿದಂತೆ ಕಾರ್ಯಕರ್ತರಿಗೆ ಅಕ್ರಮವಾಗಿ ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಪಕ್ಷದ ಧ್ವಜ ಸುಟ್ಟ ಘಟನೆ ತಾಲೂಕಿನ ಮಾಳೆಗಾಂವ ತಾಂಡಾದಲ್ಲಿ ಜರುಗಿದೆ.
ಘಟನಾ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತ ಅನೀಲ್ ಅವರು ಹೊಕ್ರಾಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಳೆಗಾಂವ ತಾಂಡಾದ ವಿಕಾಸ, ಪ್ರೇಮ್ ದಾಸ ರಾಠೋಡ್, ಪವನ, ವಸಂತ, ವಿಜಯ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜೆಡಿಎಸ್ ಎಂಎಲ್‌ಎ ಟಿಕೇಟ್ ಆಕಾಂಕ್ಷಿ ಜೈಸಿಂಗ್ ರಾಠೋಡ ಹಾಗೂ ಜೆಡಿಎಸ್ ಕಾರ್ಯಕರ್ತರು ಮಾಳೆಗಾಂವ ತಾಂಡಾಕ್ಕೆ ಜನರ ಸಮಸ್ಯೆ ಆಲಿಸಲು ಹೋದಾಗ ಆರೋಪಿಗಳು ವಾಹನಗಳನ್ನು ಅಕ್ರಮವಾಗಿ ತಡೆದು ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದ್ದಾರೆ ಹಾಗೂ ಪ್ರಭು ಚವ್ಹಾಣಗೆ ಜಯವಾಗಲಿ ಎಂದು ಕೂಗಿ ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಜೆಡಿಎಸ್ ಪಕ್ಷದ ಧ್ವಜವನ್ನು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.