ಔರಾದ್: ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನವು ಪ್ರಮುಖ ಪಾತ್ರ ವಹಿಸಲಿದ್ದು ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸಬೇಕು ಎಂದು ಮತಗಟ್ಟೆ ಸೆಕ್ಟರ್ ಅಧಿಕಾರಿ ರಾಜೇಂದ್ರ ತಿಳಿಸಿದರು.
ತಾಲೂಕಿನ ನಾಗುರ್ (ಎಂ)ದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ಹಾಗೂ ತಹಶೀಲ್ದಾರ ಕಚೇರಿಯ ವತಿಯಿಂದ ವಿ.ವಿ. ಪ್ರಾತ್ಯಕ್ಷಿಕೆಯನ್ನು ಗ್ರಾಮದ ಸಾರ್ವಜನಿಕರಿಗೆ ಮತಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಿ ಮಾತನಾಡಿದ ಅವರು, ಅರ್ಹ ಮತದಾರರು ಚಲಾಯಿಸುವ ಮತವು ಚಲಾಯಿಸಿದ ಪಕ್ಷ ಅಥವಾ ವ್ಯಕ್ತಿಗೆ ದಾಖಲಾದ ಬಗ್ಗೆ ಖಾತರಿಪಡಿಸಿಕೊಳ್ಳಲು ವಿ.ವಿ.ಪ್ಯಾಟ ಯಂತ್ರ ಸಹಾಯವಾಗಲಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ ಮೂಲಕ ಮತ ಚಲಾಯಿಸಲು ಅನುಕೂಲವಾಗುತ್ತಿದೆ ಎಂದರು. ವಿದ್ಯುನ್ಮಾನ ಮತಯಂತ್ರದ ಬಳಕೆಯ ಪ್ರತಿ ಹಂತಗಳನ್ನು ವಿವರಿಸಿ ಪ್ರಾತ್ಯಕ್ಷಿಕೆಯನ್ನು ಸಾದರಪಡಿಸಿದರು.
ಚಿಂತಾಕಿ ವಲಯ ಕಂದಾಯ ಅಧಿಕಾರಿ ಬಾಬುರಾವ್ ಮೇತ್ರೆ ಮಾತನಾಡಿ, ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳಿಗಾಗಿ ಮತದಾರರಿಗೆ ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತಿದ್ದು, ಎಲ್ಲಾ ಮತದಾರರು ಈ ವಿದ್ಯುನ್ಮಾನ ಯಂತ್ರದ ಮಾಹಿತಿ ಪಡೆದು ಮುಂಬರುವ ಚುನಾವಣೆಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಾಲಾಜಿ, ರಾಜಕುಮಾರ, ದೀಪಕ ಪಾಟೀಲ, ಶಿವರಾಜ್ ಮಾನುರೆ ಸೇರಿದಂತೆ ಇತರರು ಇದ್ದರು.