ಔರಾದ: ನನಗೆ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಉತ್ತಮ ಸ್ಥಿತಿಯಲ್ಲಿರಲು ಪಕ್ಷದ ಕಾರ್ಯಕರ್ತರ ಶ್ರಮ ಸಾಕಷ್ಟಿದೆ. ಚುನಾವಣೆಯಲ್ಲಿ ತಮ್ಮ ಶಕ್ತಿಯನ್ನು ತೋರಿಸಬೇಕು. ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸವನ್ನು ಚುರುಕಿನಿಂದ ಮಾಡಬೇಕು. ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲು ತಮ್ಮನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಪ್ರಭು.ಬಿ ಚವ್ಹಾಣ ಮನವಿ ಮಾಡಿದರು.
ತಾಲ್ಲೂಕಿನ ಗಣೇಶಪೂರ(ಎ), ಬೋರಾಳ, ತುಳಜಾಪೂರ, ಏಕಲಾರ, ಕೊಳ್ಳೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ಭೇಟಿ ಮಾಡಿ ಮಾತನಾಡಿದರು.
ಔರಾದ(ಬಿ) ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದಾಗಿ ಶಾಸಕನಾಗಿ ಮತ್ತು ಸಚಿವನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಜನರ ನಿರೀಕ್ಷೆಯಂತೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಬಿಜೆಪಿ ನೇತೃತ್ವದ ಸರ್ಕಾರದಿಂದ ಹೆಚ್ಚಿನ ಕೆಲಸಗಳಾಗಿವೆ ಎಂದರು.
ಸಚಿವರು ಜೊನ್ನಿಕೇರಿ, ಕಪ್ಪೆಕೇರಿ, ಸಂತಪೂರ, ಮಸ್ಕಲ್, ಗಂಗಾರಾಮ ತಾಂಡಾ, ಹೆಡಗಾಪೂರ, ನಿಟ್ಟೂರ(ಕೆ),ರಕ್ಷ್ಯಾಳ(ಕೆ), ರಕ್ಷಾಳ(ಬಿ), ಬೆಳಕೊಣಿ(ಚೌ), ಮುಂಗನಾಳ ಸೇರಿದಂತೆ ಸುಮಾರು 16ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ರಾಜಕುಮಾರ ಪೋಕಲವಾರ. ದೊಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ, ಎಂ.ಡಿ ಸಲಾವುದ್ದಿನ್, ಶಿವಕುಮಾರ ಪಾಂಚಾಳ ಇದ್ದರು.