ಔರಾದ: ಮಾನವ ಜೀವನ ಅತ್ಯಮೂಲ್ಯವಾದುದು. ಹಲವು ಜನ್ಮಗಳ ಪುಣ್ಯದ ಫಲವಾಗಿ ಮಾನವ ಜೀವನ ಲಭಿಸಿದೆ. ಜಗದ್ಗುರು ರೇಣುಕಾಚಾರ್ಯರು ಸಾರಿದ ಜೀವನ ದರ್ಶನದ ಸಂದೇಶ ಮತ್ತು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥೋಪದೇಶ ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪವಾಗಿವೆ ಎಂದು ಹಣೇಗಾಂವ ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವೀರಶೈವ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸಹಯೋಗದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಉತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಮಾನವೀಯ ಉದಾತ್ತ ಮೌಲ್ಯಗಳನ್ನು ಸಂವರ್ಧಿಸಿದ ಕೀರ್ತಿ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ, ಎಲ್ಲ ಧರ್ಮ ಹೇಳುವುದು ಒಂದೇ ಜಗದ್ಗುರು ರೇಣುಕಾಚಾರ್ಯರ ಸಿದ್ದಾಂತ ಶಿಖಾಮಣಿ, ಬಸವಣ್ಣನವರ ವಚನಗಳು, ದಾಸರ ಕೀರ್ತನೆಗಳ, ಎಲ್ಲ ಧರ್ಮದ ಗ್ರಂಥೋಪದೇಶ ಒಂದೇ ಮಾನವ ಧರ್ಮ ದೊಡ್ಡದು, ಧರ್ಮ ರಕ್ಷಣೆ ನಮ್ಮ ಸಂಸ್ಕೃತಿ ರಕ್ಷಣೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ನಾವೆಲ್ಲರೂ ಧರ್ಮ ರಕ್ಷಣೆ ಮಾಡಬೇಕು ಅಂದಾಗ ಮಾತ್ರ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.
ಆಂಧ್ರದ ಗುಡಿಮೇಟ ಮಹಾದೇವ ಸ್ವಾಮಿ ಅವರು ಮಾತನಾಡಿ, ಸಕಲರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದುದು ಎಂದರು.
ಹೆಡಗಾಪೂರ ಮಠದ ಶತಾಯುಷಿ ಶ್ರೀ ಷ.ಬೃ 108 ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲೂಕಿನ ಖ್ಯಾತ ಕಲಾವಿದರಾದ ಸಂಜು ಸ್ವಾಮಿ ಹಾಗೂ ಮಲ್ಲಿಕಾರ್ಜುನ ನಾಗಮಾರಪಳ್ಳಿ ಅವರಿಂದ ಸಂಗೀತ ಸುಧೆ ಜರುಗಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕನ್ನಡಾಂಬೆ ವೃತ್ತದಿಂದ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಹಿರಿಯರು, ಯುವಕರು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಕೌಳಾಸ ಬಸವಲಿಂಗ ಶಿವಾಚಾರ್ಯರು, ನಾಗಭೂಷಣ ಸ್ವಾಮಿ, ರಾಜು ಮಹಾರಾಜ, ಶಿವಕುಮಾರ ಸ್ವಾಮಿ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ದೇಶಮುಖ, ಗುಂಡಯ್ಯ ಸ್ವಾಮಿ, ಗೋರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಜ ಅಲ್ಮಾಜೆ, ಗೌರವ ದೇಶಮುಖ, ರಾಜಕುಮಾರ ಏಡವೆ, ಶಂಕು ನಿಸ್ಪತೆ, ಸಂತೋಷ ದ್ಯಾಡೆ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಆನಂದ ದ್ಯಾಡೆ, ನಗರಾಧ್ಯಕ್ಷ ಅಮರಸ್ವಾಮಿ ಸ್ಥಾವರಮಠ, ದಯಾನಂದ ಸ್ವಾಮಿ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.