ಔರಾದ: ಬೀದರ ಜಿಲ್ಲೆಯ ಔರಾದ ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಣಗಂಬ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಇಲ್ಲಿನ ದೇಶಮುಖ್ ಮನೆತನದವರು ತಲೆ ತಲಾಂತರದಿಂದ ಈ ಆಚರಣೆ ಮಾಡುತ್ತಾ ಬಂದಿದ್ದಾರೆ. ಸುಮಾರು 90 ಅಡಿ ಉದ್ದ ಇರುವ ಈ ರಣಗಂಬ 10ರಿಂದ 12 ಟನ್‌ನಷ್ಟು ತೂಗುತ್ತದೆ. ಯಾವುದೇ ಯಂತ್ರದ ಸಹಾಯವಿಲ್ಲದೆ ಊರಿನ ಜನರೇ ಈ ರಣಗಂಬವನ್ನ ಮೇಲಕ್ಕೆ ನಿಲ್ಲಿಸುವುದು ಈ ಜಾತ್ರೆಯ ವಿಶೇಷವಾಗಿದೆ. ಬೃಹತ್ ಗಾತ್ರದ ಹಗ್ಗ ಹಾಗೂ ಕಟ್ಟಿಗೆಯ ಸಹಾಯದಿಂದ ಮೇಲೆತ್ತಿ ರಣಗಂಬವನ್ನು ಪ್ರತಿಷ್ಠಾಪಿಸುವುದು ಈ ಊರಿನವರ ಅಭಿಮಾನದ ಸಂಕೇತ.
ಇನ್ನೂ ಈ ರಣಗಂಬಕ್ಕೆ ಜಾತ್ರಾ ನಿಮಿತ್ಯವಾಗಿ ವಿಶೇಷ ಪೂಜೆಗಳು ಸಂದವು. ರಣಗಂಬವನ್ನ ಹೆಣ್ಣು ದೇವತೆಯ ಪ್ರತಿರೂಪವೆಂಬತೆ ಬಿಂಬಿಸಿ ಊರಿನ ಜನರು ಸೀರೆ, ಬಳೆ, ಬಟ್ಟೆ, ಗೋಧಿ ಉಡಿ ಅಕ್ಕಿ ತುಂಬಿ ತಮ್ಮ ಹರಿಕೆಯನ್ನ ತೀರಿಸಿದರು. ಬೆಳಗ್ಗೆ ನಸುಕಿನ ಜಾವ ರಣಗಂಬ ಏರಿಸುವುದು ಮಧ್ಯಾಹ್ನದವರೆಗೆ ಈ ಕೆಲಸ ನಡೆಯುತ್ತದೆ. ಸಂಜೆ ಊರಿನವರ ಸಮ್ಮುಖದಲ್ಲಿ ಕೋಲಾಟ, ನೃತ್ಯ, ಭಜನೆ, ನಂತರ ಆಂಧ್ಯಾ ಮೆರವಣಿಗೆ ನಡೆಯುತ್ತದೆ ನಂತರ ರಣಗಂಬವನ್ನ ನೆಲಕ್ಕೆ ಬಿಳಿಸಲಾಗುತ್ತದೆ.
ರಣಗಂಬ ಜಾತ್ರೆಯ ಐತಿಹಾಸಿಕ ಹಿನ್ನೆಲೆ: ದೇಶಮುಖರೆಂಬ ಪಾಳೇಗಾರರು ವಡಗಾಂವ ಗ್ರಾಮವನ್ನ ಆಳ್ವಿಕೆ ನಡೆಸುತ್ತಿದ್ದರು. ಶತ್ರುಗಳನ್ನು ಸೋಲಿಸಿದ ಸವಿ ನೆನಪಿಗಾಗಿ ಬೃಹತ್ ಗಾತ್ರದ ರಣಗಂಬವನ್ನ ಸ್ಥಾಪಿಸಲಾಗಿದೆ. ಈ ಸಂಪ್ರದಾಯವು ಇಂದಿಗೂ ಕೂಡ ಮುಂದುವರೆದುಕೊಂಡು ಬಂದಿದ್ದು, ರಣಗಂಬವನ್ನ ಎತ್ತಿ ನಿಲ್ಲಿಸದಿದ್ದರೆ ಇಡೀ ಊರೇ ಶಾಪಗ್ರಸ್ತ ವಾಗಲಿದೆ ಎನ್ನುವುದು ಊರಿನವರ ಅಭಿಪ್ರಾಯವಾಗಿದೆ. ಅಂದಿನಿಂದ ಇಲ್ಲಿಯವರೆಗೂ ರಣಗಂಬ ಜಾತ್ರೆ ಆಚರಣೆ ಮಾಡಲಾಗುತ್ತಿದೆ.