ಔರಾದ: ತಿಗಳ ಸಮುದಾಯದ ದೇವರು ಶ್ರೀ ಅಗ್ನಿಬನ್ನಿರಾಯಸ್ವಾಮಿಯವರು ಎಂದು ಉಪನ್ಯಾಸಕಿ ಅಂಬಿಕಾ ವಿಶ್ವಕರ್ಮ ಹೇಳಿದರು. ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಅಗ್ನಿಯ ಅವಶ್ಯಕತೆ ಇದ್ದಿರುತ್ತದೆ. ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ಅಗ್ನಿಯ ಮಹತ್ವ ತನ್ನದೇ ಆಗಿದೆ ಎಂದು ಹೇಳಿದರು. ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಪಂಚಮಹಾಭೂತಗಳಲ್ಲಿ ಅಗ್ನಿಯು ಒಂದು, ಯಜ್ಞ ಯಾಗದಿಗಳು ಹಾಗೂ ಋಗ್ವೇದದಲ್ಲಿ ಕೂಡ ಅಗ್ನಿಯ ಸ್ತುತಿಗಳಿವೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಸುರೇಖಾ ದಡ್ಡೆ ಮತ್ತು ಇತರರು ಉಪಸ್ಥಿತರಿದ್ದರು.