ಔರಾದ: ಆರೋಗ್ಯವಂತ ಯುವ ಸಮುದಾಯವು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಜಮೀಯತ ಉಲಮಾ-ಎ-ಹಿಂದ ಸಂಘದ ಅಧ್ಯಕ್ಷ ಮಹಮ್ಮದ್ ನಜೀರ್ ಖುರೇಶಿ ಹೇಳಿದರು.
ಕಮಲನಗರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಮೀಯತ್ ಉಲಮಾ-ಎ-ಹಿಂದ ಸಂಘಟನೆಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಾಗುವುದಿಲ್ಲ. ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ರಕ್ತದಾನ ಮಾಡಲು ಹಿಂಜರಿಯಬಾರದು. ಈ ಬಗ್ಗೆ ಯುವಕರು ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಂಘದ ಉಪಾಧ್ಯಕ್ಷ ಅಜರೋದ್ದೀನ ಬಾಗವಾನ ಮಾತನಾಡಿ, ರಕ್ತದ ಅವಶ್ಯಕತೆ ಉಂಟಾದಾಗ ಮಾತ್ರ ರಕ್ತದ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ಆದ್ದರಿಂದ ಯುವಕರು ರಕ್ತದಾನದ ಕುರಿತು ಇರುವ ಮೌಡ್ಯಗಳನ್ನು ತೊಡೆಯುವ ಕೆಲಸ ಮಾಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಡಾ. ಸಂದೀಪ, ಗ್ರಾ.ಪಂ ಸದಸ್ಯ ಪ್ರವೀಣ ಕದಮ, ಮುಖಂಡರಾದ ಪ್ರವೀಣ ಮಂಗಳೂರೆ, ಸುಭಾಷ ಮಿರ್ಚೆ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ ಜೈದ ತಂಬೋಳಿ, ಪದಾಧಿಕಾರಿಗಳಾದ ಫಾರುಕ ಮನಿಯರ, ಸೈಯ್ಯದ ಮುಸಾ, ಇಲಾಹಿ ಬಾಗವಾನ, ಸಲ್ಮಾನ ತಂಬೋಲಿ, ಅತೀಕ ಮನಿಯಾರ, ರಫೀಕ ಮನಿಯಾರ, ಹಫೀಜ ಉಸ್ಮಾನ, ಸಾಜಿದ ತಂಬೋಲಿ, ಇಸ್ಮಾಯಿಲ್ ಪಠಾಣ, ಮುಕ್ತಾರ ಮನಿಯಾರ ಹಾಗೂ ಅನೇಕರು ಇದ್ದರು.