ಔರಾದ: ಪಶು ಸಂಗೋಪನೆ ಸಚಿವ ಪ್ರಭು .ಬಿ ಚವ್ಹಾಣ ಸೋಮವಾರ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸುಮಾರು 18 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಭಾಸುನಾಯಕ್ ತಾಂಡಾ, ರಾಮರಾವ್ ತಾಂಡಾ, ಸಾವರಗಾಂವ, ದಾಬಕಾ(ಸಿ), ಗಣೇಶಪೂರ(ಯು) ಗೇಮಾ ತಾಂಡಾ, ಖತಗಾಂವ, ಕಮಲನಗರ, ಮುರುಗ(ಕೆ), ಚಾಂಡೇಶ್ವರ, ತೋರ್ಣಾ, ಬೆಂಬ್ರಾ, ಗೌಂಡಗಾಂವ, ಬೆಳಕುಣಿ(ಚೌ) ವ್ಯಾಪ್ತಿಯಲ್ಲಿರುವ ಗಂಗಾರಾಮ ತಾಂಡಾ, ರಮಾತಾಂಡಾ, ಮಾನಸಿಂಗ್ ತಾಂಡಾ, ಜೀತಮಲ್ ತಾಂಡಾ ಸೇರಿದಂತೆ 16ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಭಾಸುನಾಯಕ್ ತಾಂಡಾದಲ್ಲಿ 43.3 ಲಕ್ಷ ಹಾಗೂ ರಾಮರಾವ್ ತಾಂಡಾದಲ್ಲಿ 28 ಲಕ್ಷ ಮೊತ್ತದ ಜಲ ಜೀವನ ಮಿಷನ್(Jal Jeevan Mission) ಕಾಮಗಾರಿ, ಸಾವರಗಾಂವನಲ್ಲಿ 16 ಲಕ್ಷ ಮೊತ್ತದ ಹೈಮಾಸ್ಟ್ ವಿದ್ಯುತ್ ದೀಪ, ದಾಬಕಾದಲ್ಲಿ 50 ಲಕ್ಷ ಮೊತ್ತದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ, ಗೇಮಾ ತಾಂಡಾದಲ್ಲಿ 33.83 ಲಕ್ಷ ಹಾಗೂ ಖತಗಾಂವನಲ್ಲಿ 145 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ಕಮಲನಗರದಲ್ಲಿ 16 ಲಕ್ಷದ ಹೈಮಾಸ್ಟ್ ವಿದ್ಯುತ್ ದೀಪ, ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ 40 ಲಕ್ಷ ಮೊತ್ತದ ಹೆಚ್ಚುವರಿ ಕೋಣೆ ಮತ್ತು ಆಟದ ಮೈದಾನ ನಿರ್ಮಾಣ ಹಾಗೂ 570.40 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಹಾಗೆಯೇ ಮುರ್ಗ್(ಕೆ) ಗ್ರಾಮದಲ್ಲಿ 47.70 ಲಕ್ಷದ ಜೆಜೆಎಮ್ ಕಾಮಗಾರಿ, ಚಾಂಡೇಶ್ವರ ಗ್ರಾಮದಲ್ಲಿ ಚಾಂಡೇಶ್ವರದಿಂದ ಹುಲಸೂರು ವರೆಗೆ 120 ಲಕ್ಷ ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿ, ಗೌಂಡಗಾಂವನಲ್ಲಿ ಮುಂಗನಾಳದಿಂದ ಕುಶನೂರ ವರೆಗೆ 240 ಲಕ್ಷದ ರಸ್ತೆ ಕಾಮಗಾರಿ ಹಾಗೂ ತೋರ್ಣಾದಲ್ಲಿ 245 ಲಕ್ಷ, ಬೆಂಬ್ರಾದಲ್ಲಿ 99.85 ಲಕ್ಷ, ಗಂಗಾರಾಮ ತಾಂಡಾದಲ್ಲಿ 30.17 ಲಕ್ಷ, ರಮಾತಾಂಡಾದಲ್ಲಿ 26.64 ಲಕ್ಷ, ಮಾನಸಿಂಗ್ ತಾಂಡಾದಲ್ಲಿ 24.20 ಲಕ್ಷ, ಜೀತ್ಮಲ್ ತಾಂಡಾದಲ್ಲಿ 13 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸಚಿವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಪ್ರತಿಯೊಂದು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕೆಲಸ ಕಳಪೆಯಾಗಿದೆ ಎಂದು ಯಾರಾದರೂ ದೂರು ನೀಡಿದಲ್ಲಿ ಸಂಬಂಧಿಸಿದ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಮುಲಾಜಿಲ್ಲದೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿ ವರ್ಷ ಪದೇ-ಪದೇ ಎದುರಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಕಾಮಗಾರಿ ನಡೆದ ಎಲ್ಲ ಗ್ರಾಮಗಳಲ್ಲಿ ಪ್ರತಿ ಮನೆ-ಮನೆಗೆ ನೀರು ಸರಬರಾಜಾಗಬೇಕು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಹಾಳಾದ ರಸ್ತೆಯನ್ನು ಸರಿಪಡಿಸುವುದು ಸೇರಿದಂತೆ ನಿಯಮದಂತೆ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ನಿರ್ದೇಶನ ನೀಡಿದರು.
ಸೇತುವೆ ಕಾಮಗಾರಿ ಪರಿಶೀಲನೆ:
ಗ್ರಾಮ ಸಂಚಾರದ ವೇಳೆ ಸಚಿವರು ದಾಬಕಾ ಮತ್ತು ಖೇರ್ಡಾ ಗ್ರಾಮಗಳ ಮಧ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಸಂಬಂಧಪಟ್ಟ ಅಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಸರಿಯಾಗಿ ಆಗಬೇಕು. ಆಗಾಗ ಭೇಟಿ ನೀಡಿ ಕೆಲಸ ಗುಣಮಟ್ಟದಿಂದ ಆಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಅಪೂರ್ಣ ಕಾಮಗಾರಿ ಕಂಡು ಬೇಸರ:
ಸಚಿವರು ರಾಮರಾವ್ ತಾಂಡಾಗೆ ಭೇಟಿ ನೀಡಿದ ವೇಳೆ ಗ್ರಾಮದಲ್ಲಿ ನಿರ್ಮಿಸಲಾದ ಸಮುದಾಯ ಭವನದ ಕೆಲಸ ಅಪೂರ್ಣವಾಗಿರುವುದನ್ನು ಕಂಡು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕೆಲಸ ಪೂರ್ಣವಾಗದೇ ಯಾವುದೇ ಕಾರಣಕ್ಕೂ ಬಿಲ್ ಪಾವತಿಸಬಾರದೆಂದು ಎಚ್ಚರಿಸಿದರಲ್ಲದೇ ಕ್ಷೇತ್ರದಲ್ಲಿ ಎಲ್ಲಿಯೂ ಅಪೂರ್ಣ ಕಾಮಗಾರಿಗಳು ಕಾಣದ ರೀತಿಯಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ಜಗನ್ನಾಥ ಮಜಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಡಿ.ಸುಭಾಷ, ಮುಖಂಡರಾದ ಸುರೇಶ ಭೋಸ್ಲೆ, ಸತೀಶ ಪಾಟೀಲ, ರಾಮಶೆಟ್ಟಿ ಪನ್ನಾಳೆ, ಬಾಲಾಜಿ ತೆಲಂಗ್, ರಾಜು ಪೋಕಲವಾರ, ಗಿರೀಶ ವಡೆಯರ, ಸಚಿನ್ ರಾಠೋಡ, ದೇವಾನಂದ್ ಪಾಟೀಲ, ಮಾರುತಿರಾವ ಬಿರಾದಾರ, ವಿಠಲ್, ಪ್ರದೀಪ ಪವಾರ, ದೇವದಾಸ ಪಾಟೀಲ ದಾಬಕಾ, ಬಾಲಾಜಿ ನಾಯಕ್, ಖಂಡೊಬಾ ಕಂಗಟೆ, ಹನಮಂತ ಸುರನಾರ್, ಉಮೇಶ ನಾಯಕ್, ರಾವಸಾಬ್ ಪಾಟೀಲ ಜಕನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.