ಔರಾದ: ಎರಡು ದಿನ ಬಿಡದೆ ಸುರಿದ ಆಲಿಕಲ್ಲು ಅವಖಳಿ ಮಳೆಯಿಂದ ಔರಾದ ಹಾಗೂ ಕಮಲನಗರ ತಾಲೂಕಿನಾದ್ಯಂತ ನೂರಾರು ಎಕರೆ ಜಮೀನಿನಲ್ಲಿ ರೈತರು ಬೆಳೆದ ಜೋಳ ಸಂಪೂರ್ಣ ನಾಶವಾಗಿದೆ. ಗಾರ್ ಬಿದ್ದು ತೆನೆಗಳು ಪೂರ್ಣ ಬಾಗಿ ಕಪ್ಪು ಬಣ್ಣಕ್ಕೆ ತಿರುಗಿವೆ.
ಕೋವಿಡ್ ಹೊಡೆತದಿಂದ ಈಗ ತಾನೆ ಹೊರ ಬಂದಿರುವ ತಾಲೂಕಿನ ಜನತೆ ಒಂದಿಷ್ಟು ಸುಧಾರಣೆ ಕಾಣುವ ಮುನ್ನವೇ ಆಲಿಕಲ್ಲು ಮಳೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಶೀಘ್ರವೇ ಬೆಳೆ ಹಾನಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರಿಹಾರ ಒದಗಿಸಬೇಕೆಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ತಾಲೂಕಿನ ರೈತರು ಪ್ರತಿದಿನ ನಮ್ಮ ಮುಂದೆ ಬಂದು ಸರ್ಕಾರದಿಂದ ಪರಿಹಾರ ಕೊಡಿಸಿ ಎಂದು ಕೇಳುತ್ತಿದ್ದಾರೆ ಎಂದರಲ್ಲದೆ ಶೀಘ್ರವೇ ಅಧಿಕಾರಿಗಳು ಸರ್ವೆ ಮಾಡಿ ಪರಿಹಾರ ಒದಗಿಸಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಏಕತಾ ಫೌಂಡೇಶನ್ ಪ್ರಮುಖರಾದ ಮಾದಪ್ಪ ಪಿಟ್ರೆ, ಪ್ರದೀಪ ಸ್ವಾಮಿ, ಮಹೇಶ ಫುಲಾರಿ, ಧನರಾಜ, ಮಾನಕಾರಿ, ವಿಷ್ಣುರೆಡ್ಡಿ ಸೇರಿದಂತೆ ಅನೇಕರಿದ್ದರು.